ಏಲಂ: ನೈರುತ್ಯ ಪರ್ಷಿಯದಲ್ಲಿದ್ದ ಒಂದು ಪ್ರಾಚೀನ ದೇಶ. ಸ್ಥೂಲವಾಗಿ ಈಗಿನ ಕೂಜಿûಸ್ತಾನ್ ಪ್ರಾಂತ್ಯದಲ್ಲಿತ್ತೆನ್ನಬಹುದು. ಭೌಗೋಳಿಕವಾಗಿಯೂ ಸಾಂಸ್ಕೃತಿಕವಾಗಿಯೂ ಬ್ಯಾಬಿಲೋನಿಯದ ಪುರ್ವಕ್ಕೆ ಯುಫ್ರೇಟೀಸ್ ಮತ್ತು ಟೈಗ್ರಿಸ್ ನದಿಗಳ ದಕ್ಷಿಣ ಪ್ರದೇಶವೇ ಏಲಮಿನ ಮುಖ್ಯ ಭಾಗ. ಆಗಿಂದಾಗ್ಗೆ ಇಲ್ಲಿನ ಜನ ನೆರೆಹೊರೆಯ ಪ್ರದೇಶಗಳ ಜನರೊಂದಿಗೆ ಹೋರಾಡುತ್ತಿದ್ದುದರಿಂದ ಈಶಾನ್ಯ ಆಗ್ನೇಯಗಳ ಬೆಟ್ಟಗಾಡುಗಳೂ ಈ ದೇಶದ ಎಲ್ಲೆಯೊಳಕ್ಕೆ ಸೇರಿದ್ದುದುಂಟು. ಇದರ ಎಲ್ಲೆಯನ್ನು ಖಚಿತವಾಗಿ ಹೇಳುವುದು ಅಸಾಧ್ಯ. ಯುಫ್ರೇಟಿಸ್ 
ಟೈಗ್ರಿಸ್ ನದಿಗಳ ಮುಖದ ಜೌಗುಪ್ರದೇಶವನ್ನು ಬೈಬಲಿನಲ್ಲಿ ಏಲಂ ಎಂದು, ಕರೆಯಲಾಗಿದೆ.

ಮೊದಲಿಗೆ ಇಲ್ಲಿ ಅನೇಕ ಬುಡಕಟ್ಟುಗಳ ಜನ ವಾಸಿಸುತ್ತಿದ್ದರು. ಇವರ ಪೈಕಿ ಸೀಮೈಟ್ಗಳೂ ಕ್ಯಾಸೈಟ್ಗಳೂ ಮುಖ್ಯರಾದವರು. ಕ್ಯಾಸೈಟ್ಗಳಿಂದಾಗಿ ಈ ಪ್ರದೇಶಕ್ಕೆ ಸಿಸ್ಸೈ ಅಥವಾ ಸಿಸ್ಸಿಯ ಎಂದು ಹೆಸರಾಗಿ ಏಲಮಿನ ಮುಖ್ಯಪಟ್ಟಣಕ್ಕೆ ಸೂಸಿಯಾನೆ ಅಥವಾ ಸೂಸ ಎಂದು ಹೆಸರಾಯಿತೆಂದು ಒಂದು ವಾದವಿದೆ. ಸುಮೇರಿಯನ್ ಗ್ರಂಥಗಳಲ್ಲಿ ಈ ಪ್ರದೇಶಕ್ಕೆ ನಮ್ಮ (ಎತ್ತರದ ಪ್ರದೇಶ) ಎಂಬ ಹೆಸರಿದ್ದು ಸಿಮೆಟಿಕ್ ಭಾಷಾಂತರದಲ್ಲಿ ಅದು ಏಲಮ್ಟು ಅಥವಾ ಏಲಂ ಎಂದಾಯಿತು. ಏಲಂನಲ್ಲಿ ಆವಾನ್, ಅನಾಸ್, ಸಿಮಾಷ್ ಮತ್ತು ಸೊಸ ಎಂಬ ನಾಲ್ಕು ಪ್ರದೇಶಗಳಿದ್ದುವೆಂದು ಪುರಾತನ ಆಕರಗಳಿಂದ ತಿಳಿದು ಬರುತ್ತದೆ.

ಪೂರ್ವಶಿಲಾಯುಗದ ಅವಶೇಷಗಳು ಇಲ್ಲಿ ದೊರಕಿಲ್ಲ. ಮಧ್ಯ ಶಿಲಾಯುಗದ ಮಾಹಿತಿಗಳು ಸ್ಪಷ್ಟವಾಗಿಲ್ಲ. ನವಶಿಲಾಯುಗ ಕಾಲದ ಅನೇಕ ಅವಶೇಷಗಳು ದೊರಕಿವೆ. ಇಲ್ಲಿನ ಜನಕ್ಕೆ ವ್ಯವಸಾಯವೂ ಪಶುಪೋಷಣೆಯೂ ಗೊತ್ತಿದ್ದುವೆಂದೂ ಇವರು ಗ್ರಾಮವಾಸಿಗಳೆಂದೂ ಹೇಳಬಹುದು. ನೆಲ ಉತ್ತು, ಬಿತ್ತಿ, ಕಲ್ಲಿನ ಹಲ್ಲುಗಳಿದ್ದ ಮೂಳೆಯ ಕುಡುಗೋಲುಗಳಿಂದ ಫಸಲು ಕೊಯ್ಯುತ್ತಿದ್ದದ್ದುಂಟು ಸ್ವಲ್ಪ ಮಟ್ಟಿಗೆ ಲೋಹದ ಬಳಕೆಯೂ ಇವರಿಗೆ ಗೊತ್ತಿತ್ತು. ಬೇಟೆಗಾರಿಕೆ ಇವರ ಮುಖ್ಯ ಕಸಬುಗಳಲ್ಲೊಂದು. ಶವಗಳನ್ನು ಮನೆಗಳಲ್ಲೂ, ಹೊರಗೂ ಹೂಳುತ್ತಿದ್ದರು. ಬುಟ್ಟಿಗಳ ನೇಯ್ಗೆ ಮತ್ತು ಲಿನನ್ ಬಟ್ಟೆ ತಯಾರಿಕೆ ಗೊತ್ತಿತ್ತು. ಪ್ರ.ಶ.ಪು. 3800ರಲ್ಲೆ ಇಲ್ಲಿ ಕೋಟೆಯಿಂದ ರಕ್ಷಿತವಾದ ನಾಗರಿಕತೆ ಪ್ರಾರಂಭವಾಗಿತ್ತು. ಆ ಕಾಲದ ಮಡಕ್ಟು ಮತ್ತು ಬೈಡಾಲು ಎಂಬಲ್ಲಿಯೂ ಕೋಟೆಗಳಿದ್ದುವು. ಪ್ರ.ಶ.ಪು. 28ನೆಯ ಶತಮಾನದಲ್ಲಿ (?) ಮೆಸೊಪೊಟೇಮಿಯದ ದೊರೆ ಸಾರ್ಗಾನ್ ಏಲಮನ್ನು ಗೆದ್ದ. ಆ ವೇಳೆಗೆ ಸುಮೇರಿಯನ್ ಸಂಸ್ಕೃತಿ ಹರಡಿತ್ತು. ಅಲ್ಲಿ ನಗರ ರಾಜ್ಯಗಳು ಇದ್ದುದಲ್ಲದೆ ಸುಮೇರಿಯನ್ ದೇವತೆಗಳ ಆರಾಧನೆಯೂ ನಡೆದಿತ್ತು. ಅರ್ ಬಳಿಯಲ್ಲಿ, ಯೂಫ್ರೇಟಿಸ್ ನದಿಯ ದಡದಲ್ಲಿದ್ದ ಎರೆಕ್ ರಾಜ್ಯದ ದೊರೆ ಏಲಮನ್ನೂ ಗೆದ್ದುದಾಗಿ ಹೇಳಲಾಗಿದೆ. ಸಾರ್ಗಾನನ ಮೊಮ್ಮಗ ನರಮ್ಸಿನನಿಂದ ಇದರ ಆಡಳಿತಕ್ಕೆ ನೇಮಿತವಾಗಿದ್ದ ಪ್ರಾಂತ್ಯಾಧಿಕಾರಿ ಸ್ವತಂತ್ರನಾಗಿ ಆಳಿದನೆಂದೂ ತಿಳಿದುಬಂದಿದೆ. ಪ್ರ.ಶ.ಪು. 3ನೆಯ ಸಹಸ್ರಮಾನದಲ್ಲಿ ಇಲ್ಲಿನ ಗುಟಿ ಜನ ಮೆಸೊಪೊಟೇಮಿಯವನ್ನು ಗೆದ್ದರು. ಮುಂದೆಯೂ ಇಲ್ಲಿ ಅನೇಕ ಸ್ವತಂತ್ರ ನಗರ ರಾಜ್ಯಗಳಿದ್ದರೂ ಇವುಗಳಲ್ಲಿ ಕೆಲವು ಸುಮೇರಿಯನ್ನರ ವಶವಾಗಿದ್ದುವು. ಸುಮೇರಿಯದ ಅರ್ ರಾಜ್ಯವನ್ನು ಇವರು ಒಮ್ಮೆ ಗೆದ್ದುಕೊಂಡಿದ್ದರು. ಏಲಂ ಪ್ರ.ಶ.ಪು. 17ನೆಯ ಶತಮಾನದಲ್ಲಿ ಬ್ಯಾಬಿಲೋನಿನ ಹಮುರಬಿಯ ವಶವಾಯಿತು. ಆಗ ಅನೇಕ ಸಾಂಸ್ಕೃತಿಕ ಅಂಶಗಳು ಮರೆಯಾದರೂ ಬರೆವಣಿಗೆ ಮುಂದುವರಿಯಿತು. ಪ್ರ.ಶ.ಪು. 8ನೆಯ ಶತಮಾನದಲ್ಲಿ ಅಸ್ಸೀರಿಯನ್ನರೊಡನೆ ಯುದ್ಧಮಾಡಿ ಬ್ಯಾಬಿಲೋನನ್ನು ಉಳಿಸಿಕೊಂಡ ಈ ಜನ ಅವರಿಂದ ಮುಂದೆ ಹಲವು ಸಲ ಸೋತರೂ ನೆರೆಹೊರೆಯ ದೊರೆಗಳ ಸಹಾಯದಿಂದ ಪ್ರ.ಶ.ಪು. 612ರಲ್ಲಿ ಆ ಚಕ್ರಾಧಿಪತ್ಯದ ನಾಶಕ್ಕೆ ಕಾರಣರಾದರು; ಅನಂತರ ಪರ್ಷಿಯದ ಅಕೆಮಿನಿಡ್ ಚಕ್ರಾಧಿಪತ್ಯದಲ್ಲಿ ಲೀನವಾಗಿ ಏಲಂ ತನ್ನ ವ್ಯಕ್ತಿತ್ವವನ್ನು ಕಳೆದುಕೊಂಡಿತು. 	  (ಬಿ.ಕೆ.ಜಿ.)

ಏಲಮಿನ ಸಾಂಸ್ಕೃತಿಕ ಧಾರ್ಮಿಕ ವಿಚಾರಗಳ ಬಗ್ಗೆ ವಿವರಗಳೇನೂ ತಿಳಿದುಬಂದಿಲ್ಲ. ಆಗಿನ ಕಾಲದ ಬರೆವಣಿಗೆಗಳೆಲ್ಲ ಬಹುತೇಕ ಯುದ್ಧಗಳಲ್ಲಿ ಪಡೆದ ವಿಜಯವನ್ನು ಕುರಿತಂಥವು. ಇಪಿಷಿನಾಕ್, ಹುಬನ್, ಕಿರಿರಿಷ, ನಹುಂಟೆ ಮತ್ತು ಷಿಮುಟ್ ಇವು ಆ ಕಾಲದ ಕೆಲವು ಮುಖ್ಯ ದೇವತೆಗಳು. ಆದರೆ ಇವುಗಳ ಗುಣಧರ್ಮ, ಶಕ್ತಿ ಪ್ರಭಾವಗಳೇನು ಎಂಬುದು ತಿಳಿದುಬಂದಿಲ್ಲ.

ಏಲಂ ಭಾಷೆ ಸುಲಭಗ್ರಾಹ್ಯವಲ್ಲ. ಅದು ಒಂದು ಸಂಶ್ಲೇಷ ಭಾಷೆ. ಆದರೆ ಇದರ ಆ ಕಾಲದ ಸಂಬಂಧಿಗಳಾಗಲಿ, ಈ ವಂಶಕ್ಕೆ ಸೇರಿದ ಆಧುನಿಕ ಭಾಷೆಗಳಾಗಲಿ ಯಾವುವೂ ಇಲ್ಲ. ಏಲಂ ಪರ್ಷಿಯದ ಅಧೀನರಾಜ್ಯವಾದಾಗ ಬರೆಯಲಾದ ಅನೇಕ ದಸ್ತಾವೇಜುಗಳು ದೊರೆತಿವೆ. ಆದರೆ ಆ ವೇಳೆಗಾಗಲೇ ಮೂಲಭಾಷೆಯ ರಚನೆಯಲ್ಲಿ ಬಹಳಮಟ್ಟಿನ ಬದಲಾವಣೆಗಳಾಗಿದ್ದವು.
ಏಲಮಿನ ಕಲೆ ವಾಸ್ತುಶಿಲ್ಪಗಳು ಬ್ಯಾಬಿಲೋನಿಯದವುಗಳ ಮಾದರಿಯವು.  

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ